ಸಂವಿಧಾನದ ತಿದ್ದುಪಡಿಯ ನಿಯಮ ಮತ್ತು ವಿಧಾನಗಳು
ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ರಾಕಜಕೀಯ ವಿದ್ಯಮಾನಗಳಿಗೆ ಅನುಗುಣವಾಗಿ ಒಂದು ರಾಷ್ಟ್ರದ ಸಂವಿಧಾನದ ಕೆಲವು ಭಾಗಗಳಲ್ಲಿ ಬದಲಾವಣೆ ತರುವುದು ಅವಶ್ಯಕ. ಇದನ್ನು ಸಂವಿಧಾನ ತಿದ್ದುಪಡಿಯೆಂದು ಕರೆಯಲಾಗುತ್ತದೆ. ವಿಶ್ವದ ಇತರೆ ಸಂವಿಧಾನಗಳಂತ ಭಾರತ ಸಂವಿಧಾನವು ಕೂಡ ತನ್ನ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಳವಡಿಸಿಕೊಂಡಿರುವ ನಿಯಮಾವು ಬ್ರಿಟನ್ ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುಸರಿಸುವ ನಿಯಮದಷ್ಟು ಸಾರಳವು ಅಲ್ಲ, ಅಮೆರಿಕಾ ಸಂಯೋಕ್ತ ಸಂಸ್ಥಾನದ ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುಸರಿಸುವ ನಿಯಮದಷ್ಟು ಕಠಿಣವೂ ಅಲ್ಲ. ನಮ್ಮ ಸಂವಿಧಾನವು ಅಮೇರಿಕಾದಂತೆ ಅನಮ್ಯ ಸಂವಿಧಾನವಾಗಿರದೆ, ಬ್ರಿಟನಿನಂತೆ ನಮ್ಯ ಸಂವಿಧಾನವೂ ಆಗಿರದೆ, ಈ ಎರಡೂ ಸಂವಿಧಾನಗಳ ಮಿಶ್ರಣವಾಗಿದೆ. ಆದ್ದರಿಂದ ಭಾರದ ಸಂವಿಧಾನವೂ ಭಾಗಶಃ ಅನಮ್ಯ ಹಾಗೂ ಭಾಗಶಃ ನಮ್ಯವಾಗಿದೆ .
ನಮ್ಮ ಸಂವಿಧಾನದ 20 ನೇ ಭಾಗದಲ್ಲಿರುವ 368 ನೇ ವಿಧಿಯ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದೆ. ಭಾರತದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ. ಸಂಸತ್ತಿನ ಮೂಲ ಸಂರಚನೆ (Basic Structure) ಯನ್ನು ಹೊರತುಪಡಿಸಿ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದುದೆಂದು ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 1973 ರಲ್ಲಿ ಸ್ಪಷ್ಟಪಡಿಸಿದೆ.
ತಿದ್ದುಪಡಿಯ ನಿಯಮಗಳು (Amendment Procedure)
ಸಂವಿಧಾನದ 368 ನೇ ವಿಧಿಯು ತಿದ್ದುಪಡಿ ನಿಯಮವನ್ನು ವಿವರರಿಸುತ್ತದೆ. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ನಿಯಮಗಳನ್ನು ಅನುಸಾರಿಸುತ್ತದೆ.
1. ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಸಂವಿಧಾನದ ತಿದ್ದುಪಡಿಗೆ ಮುಂದಾಗಬಹುದು.
2. ತಿದ್ದುಪಡಿ ಮಸೂದೆಯನ್ನು ಒಬ್ಬ ಮಂತ್ರಿ ಅಥವಾ ಒಬ್ಬ ಖಾಸಗಿ ಸದಸ್ಯ ಮಂಡಿಸಬಹುದು.ಈ ಮಸೂದೆಯನ್ನು ಮಂಡಿಸಲು ರಾಷ್ಟ್ರಾಧ್ಯಕ್ಷರ ಪೂರ್ವಾನುಮತಿ ಪಡೆಯುವ ಅಗತ್ಯವಿರುವುದಿಲ್ಲ.
3. ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನ (ಲೋಕ ಸಭೆ ಅಥವಾ ರಾಜ್ಯ ಸಭೆ)ದಲ್ಲಿ ಮಂಡಿಸಬಹುದು. ಆದರೆ, ಈ ಮಸೂದೆಯನ್ನು ರಾಜ್ಯ ಶಾಸಕಾಂಗದಲ್ಲಿ ಮಂಡಿಸುವಂತಿಲ್ಲ. ಆದರೆ ರಾಜ್ಯ ಶಾಸಕಾಂಗಗಳು ಸಂವಿಧಾನ ತಿದ್ದುಪಡಿಗೆ ಮುಂದಾಗುವಂತಿಲ್ಲ ಎಂದರ್ಥ.
4. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ವಿಶೇಷ ಬಹುಮತದೊಂದಿಗೆ ಪ್ರತ್ಯೇಕವಾಗಿ ಅನುಮೋದಿಸಬೇಕು. ಸಂಸತ್ತಿನ ಪ್ರತಿಯೊಂದು ಸದನದ ಒಟ್ಟು ಸದಸ್ಯರ ಪೈಕಿ ಶೇಕಡಾ 50 ಕ್ಕಿಂತ ಹೆಚ್ಚು ಹಾಗೂ ಹಾಜರಿದ್ದು ಮತ ನೀಡುವ ಸದಸ್ಯರ ಪೈಕಿ 2/3 ರಷ್ಟು ಸದಸ್ಯರು ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದರೆ ಅದನ್ನು ವಿಶೇಷ ಬಹುಮತ ಎಂದು ಕರೆಯಲಾಗುತ್ತದೆ.
5. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಒಂದು ಸದನವೂ ಅಂಗೀಕರಿಸಿ ಇನ್ನೊಂದು ಸದನವು ತಿರಸ್ಕರಿಸಿದರೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಜಯಂತಿ ಅಧಿವೇಶನ ಕರೆಯಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತ್ಯೇಕ ಅನುಮೋದನೆ ದೊರೆತಾಗ ಮಾತ್ರ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು.
6. ಮಸೂದೆಯು ಭಾರತದ ಒಕ್ಕೂಟ ವ್ಯವಸ್ಥೆಯ ಉಪಬಂಧಗಳನ್ನು ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದ್ದರೆ, ಅದಕ್ಕೆ ಸಂಸತ್ತು ವಿಶೇಷ ಬಹುಮತದೊಂದಿಗೆ ಅರ್ಧದಷ್ಟು ರಾಜ್ಯ ವಿಧಾನಸಭೆಗಳ ಅನುಮೋದನೆ ಅಗತ್ಯ. ಅರ್ಧದಷ್ಟು ರಾಜ್ಯ ವಿಧಾನ ಸಭೆಗಳು ಇಂತಹ ತಿದ್ದುಪಡಿ ಮಸೂದೆಯನ್ನು ಸರಳ ಬಹುಮತದೊಂದಿಗೆ ಅನುಮೋದಿಸಿದರೆ ಸಾಕು ()
7. ಲೋಕಸಭೆ ಹಾಗೂ ರಾಜ್ಯಸಭೆಗಳಿಂದ ವಿಶೇಷವಾಗಿ ಅನುಮೋದಿಸಲ್ಪಟ್ಟ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಥವಾ ಅಗತ್ಯವೆನಿಸಿದ ಇದರೊಂದಿಗೆ ಅರ್ಧದಷ್ಟು ರಾಜ್ಯ ವಿಧಾನಸಭೆಗಳಿಂದ ಅನುಮೋದಿಸಲ್ಪಟ್ಟ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಾಧ್ಯಕ್ಷರ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
8. ಹೀಗೆ ತಮ್ಮ ಅನುಮೋದನೆಗಾಗಿ ಕಳುಹಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಾಧ್ಯಕ್ಷರ ತಿರಸ್ಕರಿಸುವಂತಿಲ್ಲ ಅಥವಾ ಮರುಪರಿಶೀಲನೆಗಾಗಿ ಸಂಸತ್ತಿಗೆ ಕಳುಹಿಸುವಂತಿಲ್ಲ. ಏಕೆಂದರೆ 1971 ರಲ್ಲಿ ಜಾರುಗೆ ಬಂದ 24 ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ರಾಷ್ಟ್ರಾಧ್ಯಕ್ಷರು ತಿದ್ದುಪಡಿ ಮಸೂದೆಗೆ ತಮ್ಮ ಅನುಮೋದನೆಯನ್ನು ಕಡ್ಡಾಯವಾಗಿ ನೀಡಲೇಬೇಕು. 24 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ರಾಷ್ಟ್ರಾಧ್ಯಕ್ಷರು ಹೊಂದಿದ್ದ ವೀಟೋ ಅಧಿಕಾರವನ್ನು ರದ್ದುಗೊಳಿಸಿದೆ.
9. ರಾಷ್ಟ್ರಾಧ್ಯಕ್ಷರು ಅನುಮೋದನೆ ನೀಡಿದ ನಂತರ ತಿದ್ದುಪಡಿ ಮಸೂದೆ ಸಂವಿಧಾನ ತಿದ್ದುಪಡಿ ಕಾಯದೆಯಾಗುತ್ತದೆ ಮತ್ತು ಈ ಕಾಯ್ದೆಗೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುತ್ತದೆ.
ತಿದ್ದುಪಡಿ ವಿಧಾನಗಳು (Methods of Amendment)
ಈ ಕೆಳಗಿನ ಮೂರು ವಿಧಾನಗಳ ಮೂಲಕ ನಮ್ಮ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು.
1) ಸರಳ ಬಹುಮತ ಮೂಲಕ ತಿದ್ದುಪಡಿ
2) ವಿಶೇಷ ಬಹುಮತ ಮೂಲಕ ತಿದ್ದುಪಡಿ
3) ವಿಶೇಷ ಬಹುಮತದೊಂದಿಗೆ ಅರ್ಧದಷ್ಟು ರಾಜ್ಯ ಶಾಸಕಾಂಗಗಳ ಅನುಮೋದನೆಯೊಂದಿಗೆ ತಿದ್ದುಪಡಿ
1) ಸರಳ ಬಹುಮತದ ಮೂಲಕ ತಿದ್ದುಪಡಿ
ಸಂವಿಧಾನದ ಬಹುತೇಕ ಭಾಗಗಳನ್ನು ಸಂಸತ್ತಿನ ಸರಳ ಬಹುಮತದ ಮೂಲಕ ತಿದ್ದುಪಡಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದ ವಿಷಯಗಳೆಂದರೆ:
a. ಹೊಸ ರಾಜ್ಯಗಳ ಸೇರ್ಪಡೆ
b. ಹೊಸ ರಾಜ್ಯಗಳ ರಚನೆ, ರಾಜ್ಯಗಳ ಎಲ್ಲೆ ಅಥವಾ ಗಡಿಗಳ ಬದಲಾವಣೆ, ರಾಜ್ಯಗಳ ಹೆಸರುಗಳ ಬದಲಾವಣೆ
c. ರಾಜ್ಯ ವಿಧಾನ ಪರೀಷತ್ತುಗಳ ರಚನೆ ಅಥವಾ ರದ್ದತಿ
d. ರಾಷ್ಟ್ರಾಧ್ಯಕ್ಷ, ರಾಜ್ಯಪಾಲರ, ಸಭಾಧ್ಯಕ್ಷರ ಹಾಗೂ ನ್ಯಾಯಾಧೀಶರ ವೇತನ ಭತ್ಯೆ ಮತ್ತು ಸೌಲಭ್ಯಗಳು
e. ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಸೌಲಭ್ಯಗಳು
f. ಅಧಿಕೃತ ಭಾಷೆಯ ಬಳಕೆ
g. ಸಂಸತ್ತಿನ ಕೋರಂ (ಕನಿಷ್ಟ ಹಾಜರಿರಬೇಕಾದ ಶಾಸನಸಭೆಯ ಸದಸ್ಯರ ಸಂಖ್ಯೆ)
h. ಪೌರತ್ವವನ್ನು ಪಡೆಯುವುದು ಹಾಗೂ ಕಳೆದುಕೊಳ್ಳುವುದು.
i. ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳ ಚುನಾವಣೆಗಳು
j. ಚುನಾವಣಾ ಕ್ಷೇತ್ರಗಳ ಪುನರ್ ವಿಂಗಡಣೆ
k. ಕೇಂದ್ರಾಡಳಿತ ಪ್ರದೇಶ
l. ಆದಿವಾಸಿ ಪ್ರದೇಶಗಳ ಆಡಳಿತ.
ಈ ರೀತಿಯ ಸರಳ ಬಹುಮತದ ಮೂಲಕ ಮಾಡಲಾಗುವ ತಿದ್ದುಪಡಿ ವಿಧಾನವು 368ನೇ ವಿಧಿಯ ವ್ಯಾಪ್ತಿಗೆ ಒಳಪತ್ತಿರುವುದಿಲ್ಲ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.
2) ವಿಶೇಷ ಬಹುಮತ ಮೂಲಕ ತಿದ್ದುಪಡಿ
ಸಂವಿಧಾನದ ಕೆಲವು ಭಾಗಗಳನ್ನು ಸಂಸತ್ತಿನ ವಿಶೇಷ ಬಹುಮತದ ಮೂಲಕ ತಿದ್ದುಪಡಿ ಮಾಡಬಹುದು. ಸಂಸತ್ತಿನ ಪ್ರತಿ ಸದನದ ಒಟ್ಟು ಸದಸ್ಯರ ಪೈಕಿ ಶೇಕಡಾ 50 ಕ್ಕಿಂತ ಹೆಚ್ಚು ಹಾಗೂ ಹಾಜರಿದ್ದು ಮತ ನೀಡುವ ಸದಸ್ಯರ ಪೈಕಿ ⅔ ರಷ್ಟು ಸದಸ್ಯರು ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿದರೆ ಅದನ್ನು ವಿಶೇಷ ಬಹುಮತ ಎಂದು ಕರೆಯಲಾಗುತ್ತದೆ. ಈ ವಿಧಾನದ ಮೂಲಕ ಸಂವಿಧಾನದ ಈ ಕೆಳಗಿನ ವಿಷಯಗಳಿಗೆ ತಿದ್ದುಪಡಿ ತರಬಹುದು.
*ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು ಇತ್ಯಾದಿ.
3) ವಿಶೇಷ ಬಹುಮತ ಹಾಗೂ ಅರ್ಧದಷ್ಟು ರಾಜ್ಯಗಳ ಸಮ್ಮತಿಯ ಮೇರೆಗೆ ತಿದ್ದುಪಡಿ
ಸಂಸತ್ತಿನ ವಿಶೇಷ ಬಹುಮತದೊಂದಿಗೆ ಅರ್ಧದಷ್ಟು ರಾಜ್ಯ ಶಾಸಕಾಂಗಗಳ ಸಮ್ಮಿತಿಯ ಮೇರೆಗೆ ಸಂವಿಧಾನದ ಕೆಲವು ಭಾಗಗಳನ್ನು ತಿದ್ದುಪಡಿ ಮಾಡಬಹುದು. ಭಾರತದ ಸಂಯುಕ್ತ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ತಿದ್ದು ಪಡಿ ಮಾಡಲು ಈ ನಿಯಮವನ್ನು ಅನುಸಾರಿಸಲಾಗುತ್ತದೆ. ಅಂತಹ ವಿಷಯಗಳೆಂದರೆ.
a. ರಾಷ್ಟ್ರಾಧ್ಯಕ್ಷರ ಚುನಾವಣಾ ವಿಧಾನ
b. ಕೇಂದ್ರ ಹಾಗೂ ರಾಜ್ಯ ಕಾರಯ್ಯಂಗಾಧಿಕಾರಗಳ ವ್ಯಾಪ್ತಿ
c. ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳ ರಚನೆ ಮತ್ತು ಅಧಿಕಾರ
d. ಕೇಂದ್ರ ಹಾಗೂ ರಾಜ್ಯಗಳ ನಡುವಣ ಅಧಿಕಾರ ವಿಭಜನೆ
e. ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯ
f. ಸಂವಿಧಾನ ತಿದ್ದುಪಡಿ ವಿಧಾನ .
ಧನ್ಯವಾದಗಳು