ಆರ್ಥಿಕ ತುರ್ತು ಪರಿಸ್ಥಿತಿ ( 360 ನೇ ವಿಧಿ )
ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ದಕ್ಕೆಯಾದಗಿದೆ ಎಂದು ರಾಷ್ಟ್ರಾಧ್ಯಕ್ಷರು ಭಾವಿಸಿದಲ್ಲಿ, 360 ನೇ ವಿಧಿಯನ್ವಯ ಅವರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.
▶ 1975 ರ 38 ನೇ ತೀದಡೂಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
▶ ಆದರೆ 1978 ರ 44 ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ.
▶ ಈ ರೀತಿ 44 ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.
ಸಂಸತ್ತಿನ ಅನುಮೋದನೆ ಮತ್ತು ಅವಧಿ
ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಎರಡು ತಿಂಗಳೊಳಗಾಗಿ ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆಯಬೇಕು. ಲೋಕಸಭೆ ವಿಸರ್ಜನೆಗೊಂಡ ಸಮಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟರೆ ಅಥವಾ ಈ ಎರಡು ತಿಂಗ;ಅ ಅವಧಿಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಅನುಮೋದಿಸದೆ ಸಂಸತ್ತು ವಿಸರ್ಜನೆಗೊಂಡರೆ ಹೊಸದಾಗಿ ಅಸ್ತಿತ್ವಕ್ಕೆ ಬರುವ ಲೋಕಸಭೆಯ ಮೊದಲ ಅಧಿವೇಶನ ಆರಂಭವಾದ ದಿನದಿಂದ 30 ದಿನಗಳವರೆಗೆ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿರುತ್ತದೆ. ಆದರೆ ಈ ಮಧ್ಯೆ ರಾಜ್ಯ ಸಭೆ ತುರ್ತು ಪರಿಸ್ಥಿತಿ ಘೋಷಣೆಯನ್ನು ಅನುಮೋದಿಸಿರಬೇಕು.
ಆರ್ಥಿಕ ಪರಿಸ್ಥಿತಿಯು ಒಮ್ಮೆ ಸಂಸತ್ತಿನ ಉಭಯ ಸದನಗಳಿಂದ ಅನುಮೋದಿಸಲ್ಪಟ್ಟರೆ, ಹಿಂದಕ್ಕೆ ಪಡೆದುಕೊಳ್ಳುವವರೆಗೊ ಅನಿರ್ದಿಷ್ಟ ಕಾಲವಧಿಯವರೆಗೆ ಮುಂದುವರೆಯುತ್ತದೆ. ಇದರಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತದೆ.
1. ಆರ್ಥಿಕ ತುರ್ತು ಪರಿಸ್ಥಿತಿಯ ಕಾರ್ಯಚರಣೆಗೆ ಗರಿಷ್ಟ ಅವಧಿಯನ್ನು ನಿಗದಿಪಡಿಸಿಲ್ಲ.
2. ಆರ್ಥಿಕ ತುರ್ತು ಪರಿಸ್ಥಿತಿಯನ್ನು ಮುಂದುವರೆಸುವುದಕ್ಕೆ ಪದೇ ಪದೇ ಸಂಸತ್ತಿನ ಅನುಮೋದನೆ ಬೇಕಿಲ್ಲ.
ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಣೆಗೆ ಸಂಬಂಧಿಸಿದ ಗೊತ್ತುವಳಿಯನ್ನು ಸಂಸತ್ತಿನ ಪ್ರತಿ ಸದನವೂ ತನ್ನ ಸರಳ ಬಹುಮತದಿಂದ ಅಂಗೀಕರಿಸಿದರೆ ಸಾಕು. ರಾಷ್ಟ್ರಾಧ್ಯಕ್ಷರು ಒಂದು ಘೋಷಣೆಯನ್ನು ಹೊರಡಿಸುವುದರ ಮೂಲಕ ಯಾವ ಸಂದರ್ಭದಲ್ಲಿ ಬೇಕಾದರೂ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. ಈ ಘೋಷಣೆಗೆ ಸಂಸತ್ತಿನ ಅನುಮೋದನೆ ಪಡೆಯುವ ಅಗತ್ಯವಿಲ್ಲ.
ಆರ್ಥಿಕ ತುರ್ತು ಪರಿಸ್ಥಿಯ ಪರಿಣಾಮಗಳು
1. ಕೇಂದ್ರ ಕಾರ್ಯಾಂಗವು ತನ್ನಿಂದ ನಿರ್ಧರಿಸಲ್ಪಟ್ಟ ಹಣಕಾಸು ನಿಯಮಗಳನ್ನು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಅಲ್ಲದೆ ರಾಷ್ಟ್ರಾಧ್ಯಕ್ಷರು ಅಗತ್ಯ ಎಂದು ಭಾವಿಸುವ ಯಾವುದೇ ನಿರ್ದೇಶನಗಳನ್ನು ಕೇಂದ್ರ ಕಾರ್ಯಾಂಗವು ರಾಜ್ಯಗಳಿಗೆ ನೀಡಬಹುದು.
2. ರಾಜ್ಯ ಸರ್ಕಾರ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವ್ಯಕ್ತಿಗಳಿಗೆ ಅಥವಾ ಯಾವುದೇ ವರ್ಗದ ವ್ಯಕ್ತಿಗಳಿಗೆ ವೇತನ ಮತ್ತು ಇತರೆ ಭತ್ಯೆಗಳನ್ನು ಕಡಿತಗೊಳಿಸುವಂತೆ ನಿರ್ದೇಶನ ನೀಡಬಹುದು. ಅಲ್ಲದೆ ರಾಜ್ಯ ಶಾಸಕಾಂಗದ ಅನುಮೋದನೆ ಪಡೆದ ನಂತರ ಎಲ್ಲ ಹಣಕಾಸು ಮಸೂದೆಗಳನ್ನು ರಾಷ್ಟ್ರಾಧ್ಯಕ್ಷರ ಪರಿಗಣನೆಗೆ ಕಾಯ್ದಿರಿಸುವಂತೆ ನಿರ್ದೇಶನ ನೀಡಬಹುದು.
3. ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುವ ಎಲ್ಲ ವ್ಯಕ್ತಿಗಳ ಅಥವಾ ಯಾವುದೇ ವರ್ಗದ ವ್ಯಕ್ತಿಗಳ ಹಾಗೂ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನ್ಯಾಯಾಧೀಶರ ವೇತನ ಮತ್ತು ಇತರೆ ಭತ್ಯೆಗಳನ್ನು ಕಡಿತಗೊಳಿಸುವಂತೆ ರಾಷ್ಟ್ರಾಧ್ಯಕ್ಷರು ನಿರಧೇಶನ ನೀಡಬಹುದು.
ತುರ್ತು ಪರಿಸ್ಥಿತಿಗಳ ಉಪಯಬಂಧಗಳ ವಿಮರ್ಶೆ
ಸಂವಿಧಾನ ರಚನಾ ಸಭೆಯ ಕೆಲವು ಸದಸ್ಯರು ತುರ್ತು ಪರಿಸ್ಥಿತಿಗೆ ಸಂಬಂಧ ಪಟ್ಟ ಉಪಬಂಧಗಳನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿರುವುದರ ವಿರುದ್ದ ಈ ಕೆಳಗಿನಂತೆ ಟೀಕೆ ಮಾಡಿದ್ದಾರೆ.
1. ಸಂವಿಧಾನದ ಒಕ್ಕೊಟ ವ್ಯವಸ್ಥೆಯ ಸ್ವರೂಪ ನಾಶವಾಗುತ್ತದೆ ಮತ್ತು ಕೇಂದ್ರ ಸರ್ಕಾರವು ಸರ್ವಶಕ್ತವಾಗುತ್ತದೆ.
2. ಕೇಂದ್ರ ಹಾಗೂ ರಾಜ್ಯಗಳೆರಡರ ಅಧಿಕಾರವೆಲ್ಲವೂ ಸಂಪೂರ್ಣವಾಗಿ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗಿರುತ್ತದೆ.
3. ರಾಜ್ಯಗಳ ಹಣಕಾಸಿನ ಸ್ವಾಯತ್ತತೆಗೆ ಧಕ್ಕೆ ಬರುತ್ತದೆ.
4. ಮೂಲಭೂತ ಹಕ್ಕುಗಳು ಅರ್ಥಹೀನವಾಗುತ್ತವೆ. ಪರಿಣಾಮವಾಗಿ ಸಂವಿಧಾನದ ಪ್ರಾಜಾಸತ್ತಾತ್ಮಕ ತಳಹದಿ ಕುಸಿಯುತ್ತದೆ.
ಧನ್ಯವಾದಗಳು