ಮೂಲಭೂತ ಹಕ್ಕುಗಳು
ಸಂವಿಧಾನದ ಮೂರನೇ ಭಾಗವು ಮೂಲಭೂತ ಹಕ್ಕುಗಳ ಪಟ್ಟಿಯನ್ನು ಒಳಗೊಂಡಿದೆ. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವಿವರಗಳನ್ನು 12 ರಿಂದ 35 ನೇ ವಿಧಿಗಳಲ್ಲಿ ಕಾಣಬಹುದು. ಅಮೆರಿಕಾ ಸಂಯುಕ್ತ ಸಂಸ್ಥಾನದ ಹಕ್ಕುಗಳ ಪಟ್ಟಿಯಂದ ನಾವು ಮೂಲಭೂತ ಹಕ್ಕುಗಳನ್ನು ಎರವಲು ಪಡೆದುಕೊಡಿದ್ದೇವೆ. ಸಂವಿಧಾನದ ಮೂರನೇ ಭಾಗವನ್ನು ಭಾರತದ ಮ್ಯಾಗ್ನಕಾರ್ಟ ಎಂದು ಕರೆಯಲಾಗುತ್ತದೆ. ಮ್ಯಾಗ್ನಕಾರ್ಟ ಎಂಬುದು 1215 ರಲ್ಲಿ ಇಂಗ್ಲೆಂಡ್ ನ ಜಾನ್ ರಾಜನು ಹೊರಡಿಸಿದ ಮೂಲಭೂತ ಹಕ್ಕುಗಳ ಪ್ರಣಾಳಿಕೆಯಾಗಿದೆ. ಇದು ವಿಶ್ವದಲ್ಲಿಯೇ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಪ್ರಥಮ ಲಿಖಿತ ದಾಖಲೆಯಾಗಿವೆ.
ಜಾತಿ, ಮತ, ಧರ್ಮ, ಲಿಂಗ, ಹುಟ್ಟಿದ ಸ್ಥಳ, ಸಾಮಾಜಿಕ ಸ್ಥಾನ ಮಾನ ಇವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೊ ಮೂಲಭೂತ ಹಕ್ಕುಗಳನ್ನು ನಮ್ಮ ಸಂವಿಧಾನ ನೀಡಿದೆ, ಆದ್ದರಿಂದ ಮೂಲಭೂತ ಹಕ್ಕುಗಳು ರಾಜಕೀಯ ಸಮಾನತೆ ಮತ್ತು ರಾಷ್ಟ್ರೀಯ ಏಕತೆಗೆ ಪೂರಕವಾಗಿದೆ ಎಂದು ಹೇಳಬಹುದು. ಮೂಲಭೂತ ಹಕ್ಕುಗಳು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ನಿಯಂತ್ರಣಗಳ ನಡುವೆ ಸಮತೋಲನ ಏರ್ಪಡಿಸುತ್ತದೆ.
ಮೂಲಭೂತ ಹಕ್ಕುಗಳು ರಾಜ್ಯದ ಸರ್ವಾಧಿಕಾರವನ್ನು ನಿಯಂತ್ರಿಸುವುದರ ಮೂಲಕ ವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ. ಇವುಗಳು ರಾಜ್ಯದ ಆಕ್ರಮಣದಿಂದ ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸುತ್ತವೆ. ಇವುಗಳು ಶಾಸಕಾಂಗ ಮತ್ತು ಕಾರ್ಯಾಂಗಗಳ ನಿರಂಕುಶತೆಯನ್ನು ಮಿತಿಗೊಳಿಸುತ್ತವೆ. ಮೂಲಭೂತ ಹಕ್ಕುಗಳು ವ್ಯಕ್ತಿಗಳ ಆಳ್ವಿಕೆಯ ಬದಲಾಗಿ ಕಾನೂನಿನ ಆಧಿಪತ್ಯವನ್ನು ಸ್ಥಾಪಿಸುವ ಉದ್ದೇಶ ಹೊಂದಿವೆ. ಮೂಲಭೂತ ಹಕ್ಕುಗಳು "ರಾಜಕೀಯ ಪ್ರಜಾಪ್ರಭುತ್ವ"ಸ್ಥಾಪನೆಗೆ ಸಹಕಾರಿಯಾಗಿವೆ ಎಂದು ಒಟ್ಟಾರೆಯಾಗಿ ಹೇಳಬಹುದು.
ಎರಡು ಕಾರಣಗಳಿಂದ ಈ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಕರೆಯಲಾಗುತ್ತಿದೆ
1)ಮೊದಲನೆಯದಾಗಿ ಈ ಹಕ್ಕುಗಳು ರಾಷ್ಟ್ರದ ಮೂಲಭೂತ ಕಾನೂನಾದ ಸಂವಿಧಾನದ ಖಾತ್ರಿ ಮತ್ತು ರಕ್ಷಣೆಗೆ ಒಳಪಟ್ಟಿವೆ.
2) ಎರದನೆಯಾದಾಗಿ ಒಬ್ಬ ವ್ಯಕ್ತಿಯು ವ್ಯಕ್ತಿತ್ವದ ವಿಕಸನಕ್ಕೆ ಮೂಲಭೂತ ಹಕ್ಕುಗಳು ಅತ್ಯಗತ್ಯವಾದವುಗಲಾಗಿವೆ.
ನ್ಯಾಯಕ್ಕಾಗಿ ಮೊರೆ
ಮೂಲಭೂತ ಹಕ್ಕುಗಳು ಸಂವಿಧಾನದಲ್ಲಿ ಕಂಡುಬರುವ ಇತರೆ ನ್ಯಾಯರಕ್ಷಿತ ಹಕ್ಕುಗಳಿಗಿಂತ ಭಿನ್ನವಾದವು. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ತೊಂದರೆಗೊಳಗಾದ ವ್ಯಕ್ತಿ 32 ನೇ ವಿಧಿಯಡಿಯಲ್ಲಿ ಅವುಗಳ ಅನುಷ್ಟಾನಕ್ಕಾಗಿ ನೇರವಾಗಿ ಸುಪ್ರೀಂ ಕೋರ್ಟ್ ನ ಮೊರೆ ಹೋಗಬಹುದು. ಆದರೆ ಇತರೆ ನ್ಯಾಯ ರಕ್ಷಿತ ಹಕ್ಕುಗಳ ಉಲ್ಲಂಘನೆಯಾದಾಗ ತೊಂದರೆಗೊಳಗಾದ ವ್ಯಕ್ತಿ ಅವುಗಳ ಅನುಷ್ಟಾನಕ್ಕಾಗಿ 32 ನೇ ವಿಧಿಯಡಿಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ಮೊರೆ ಹೊಂಗುವಂತಿಲ್ಲ. ಅವನು 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ಮೊರೆ ಹೋಗಬಹುದು.
ಮೂಲಭೂತ ಹಕ್ಕುಗಳ ಸ್ವರೂಪ
1) ವಸ್ತಾರವಾದ ನಿರೂಪಣೆ
ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ. ಸಂವಿಧಾನದ ಮೂರನೆಯ ಭಾಗವನ್ನು ಸಂಪೂರ್ಣವಾಗಿ ಮೂಲಭೂತ ಹಕ್ಕುಗಳ ವಿವರಣೆಗೆಂದೇ ಮಿಸಲಿರಿಸಲಾಗಿದೆ. ಸಂವಿಧಾನದ 12 ನೇ ವಿಧಿಯಿಂದ 35 ನೇ ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿವೆ. ಮೂರನೇ ಭಾಗವು ಮೂಲಭೂತ ಹಕ್ಕುಗಳ ವರ್ಗೀಕರಣ, ಅವುಗಳ ಮೇಲಿನ ನಿರ್ಬಂಧಗಳು ಹಾಗೂ ರಕ್ಷಣಾ ಕ್ರಮಗಳ ವಿವರಣೆಯನ್ನು ಒಳಗೊಂಡಿದೆ.
2) ಪೌರರು ಮತ್ತು ವಿದೇಶಿಯರನ್ನು ಪ್ರತ್ಯೇಕಿಸುವುದು
ಕೆಲವು ಮೂಲಭೂತ ಹಕ್ಕುಗಳನ್ನು ಪೌರರಿಗೆ ಮಾತ್ರ ನೀಡಲಾಗಿದೆ. ಆದರೆ ಕೆಲವು ಮೂಲಭೂತ ಹಕ್ಕುಗಳನ್ನು ಪೌರರು ಹಾಗೂ ವಿದೇಶಿಯರು ಎಂದು ತಾರತಮ್ಯ ಮಾಡದೆ ಎಲ್ಲರಿಗೂ ನೀಡಲಾಗಿದೆ. ಹೀಗೆ ಮೂಲಭೂತ ಹಕ್ಕುಗಳು ಪೌರರು ಮತ್ತು ವಿದೇಶಿಯರನ್ನು ಪರಸ್ಪರ ಪ್ರತ್ಯೇಕಿಸುತ್ತದೆ.
ಉದಾ: ಸಾರ್ವಜನಿಕ ಉದ್ಯೋಗದ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು, ಸಭೆ ಸೇರುವ ಹಕ್ಕು
3) ಮೂಲಭೂತ ಹಕ್ಕುಗಳು ನ್ಯಾಯ ರಕ್ಷಿತವಾದವುಗಳು
ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗಗಳ ಶಾಸನಗಳನ್ನು ಹಾಗೂ ಕೇಂದ್ರ ಅಥವಾ ರಾಜ್ಯ ಕಾರ್ಯಾಂಗಗಳ ಆದೇಶಗಳನ್ನು, ನಿರ್ಧಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಅಸಿಂಧು ಎಂದು ಘೋಷಿಸುವುದರ ಮೂಲಕ ಅವುಗಳನ್ನು ಶೂನ್ಯೀಕರಣಗೊಳಿಸುತ್ತದೆ.
4) ಮೂಲಭೂತ ಹಕ್ಕುಗಳು ಪರಿಮಿತ ಸ್ವರೂಪವನ್ನು ಹೊಂದಿವೆ
ಸಮುದಾಯದ ಹಿತಾಸಕ್ತಿಯ ದೃಷ್ಟಿಯಿಂದ ಮೂಲಭೂತ ಹಕ್ಕುಗಳ ಮೇಲೆ ಸಕಾರಣವಾದ ನಿರ್ಬಂಧಗಳನ್ನು ವಿಧಿಸಬಹುದು ಉದಾ: ಸಂವಿಧಾನದ 19 ನೇ ವಿಧಿಯು ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಆದರೆ ರಾಜ್ಯದ ಭದ್ರತೆ, ಸಾರ್ವಜನಿಕ ಶಾಂತಿ ಹಾಗೂ ಇತರೆ ದೇಶಗಳೊಂದಿಗಿನ ಮೈತ್ರಿ ಯುತ ಸಂಬಂಧ ಇವುಗಳಿಗೆ ಧಕ್ಕೆಯಾಗದಂತೆ ಈ ಹಕ್ಕನು ಅನುಭವಿಸಬಹುದಾಗಿದೆ. ಸಂವಿಧಾನದ 16 ನೇ ವಿಧಿಯು ಎಲ್ಲ ಪ್ರಜೆಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ಸಾಮಾನ ಅವಕಾಶವನ್ನು ನೀಡುತ್ತದೆ. ಆದರೆ ರಾಜ್ಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಬಹುದು. ನಿರ್ಬಂಧಗಳು ಸಕಾರಣವಾದವುಗಳೇ ಅಥವಾ ಅಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.
5) ಅಲಿಖಿತ ಹಕ್ಕುಗಳಿಗೆ ಅವಕಾಶವಿಲ್ಲ
ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಪ್ರಸ್ತಾಪಿಸಲೇ ಬೇಕು. ಪ್ರಸ್ತಾಪಿಸದೇ ಇರುವ ನೈಸರ್ಗಿಕ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಪರಿಗಣಿಸಲಾಗುವುದಿಲ್ಲ.
6) ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಬಹುದು
ಸಂಸತ್ತು ಮೂಲಭೂತ ಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಹೊಂದಿದೆ. ಇದಕ್ಕೆ ಸಂಸತ್ತಿನ ವಿಶೇಷ ಬಹುಮತ ಅಗತ್ಯ. ಉದಾ: 1978 ರಲ್ಲಿ ಸಂವಿಧಾನಕ್ಕೆ 44 ನೇ ತಿದ್ದುಪಡಿ ತರುವ ಮೂಲಕ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಗಳ ಪಟ್ಟಿಯಿಂದ ತೆಗದು ಹಾಕಲಾಯಿತು. 2002 ರ 86 ನೇ ಸಂವಿಧಾನ ತಿದ್ದುಪಡಿಯ ಮೂಲಕ 21-A ವಿಧಿಯಡಿಯಲ್ಲಿ 6 ರಿಂದ 14 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣ ಪಡೆಯುವುದನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಯಿತು.
7) ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದು
20 ಮತ್ತು 21 ನೇ ವಿಧಿಯಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಹೊರತುಪಡಿಸಿ ಇತರೆ ಇತರೆ ಎಲ್ಲಾ ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯು ಜಾರಿಯಲ್ಲಿರುವ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರು ಅಮನತ್ತಿನಲ್ಲಡಬಹುದು. ಯುದ್ದ ಅಥವಾ ಬಾಹ್ಯ ಆಕ್ರಮಣದ ಆಧಾರದ ಮೇಲೆ ಘೋಷಿಸಲಾಗುವ ಬಾಹ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ 19 ನೇ ವಿಧಿಯಡಿಯಲ್ಲಿ ಕಂಡುಬರುವ ಹಕ್ಕುಗಳನ್ನು ಅಮಾನತ್ತಿನಲ್ಲಿಡಬಹುದು. \
ಮೂಲಭೂತ ಹಕ್ಕುಗಳ ವರ್ಗೀಕರಣ
ಮೂಲ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು 7 ವಿಧಗಳಾಗಿ ವರ್ಗೀಕರಿಸಲಾಗಿತ್ತು. ಆದರೆ 1978 ರಲ್ಲಿ 44 ನೇ ತಿದ್ದುಪಡಿಯ ಮೂಲಕ ಆಸ್ತಿ ಹಕ್ಕು (31 ನೇ ವಿಧಿ)ನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗದು ಹಾಕಲಾಯಿತು. ಪ್ರಸ್ತುತ ಆಸ್ತಿಯ ಹಕ್ಕು 300-a ವಿಧಿಯಡಿಯಲ್ಲಿ ಕೇವಲ ಕಾನೂನುಬದ್ದ ಹಕ್ಕಾಗಿ ಉಳಿದಿದೆ. ಸಂವಿಧಾನದ ಮೂರನೇ ಭಾಗದಲ್ಲಿ 6 ಮೂಲಭೂತ ಹಕ್ಕುಗಳು ಕಂಡುಬರುತ್ತದೆ. ಅವುಗಳೆಂದರೆ.
1. ಸಮಾನತೆಯ ಹಕ್ಕು (14-18 ನೇ ವಿಧಿ)
2. ಸ್ವಾತಂತ್ರ್ಯದ ಹಕ್ಕು (19-22 ನೇ ವಿಧಿ)
3. ಶೋಷಣೆಯ ವಿರುದ್ಧ ಹಕ್ಕು (23-24 ನೇ ವಿಧಿ)
4. ಧಾರ್ಮಿಕ ಸ್ವಾತಂತ್ರ್ಯ ಹಕ್ಕು (25-28 ನೇ ವಿಧಿ)
5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು (29-30 ನೇ ವಿಧಿ)
6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು (32 ನೇ ವಿಧಿ )
ಧನ್ಯವಾದಗಳು